ಜಾವಗಲ್ ಶ್ರೀನಾಥ್
 1969 ಭಾರತದ ಕ್ರಿಕೆಟ್ ಆಟಗಾರ. ವೇಗದ ಬೋಲರ್. 1969 ಆಗಸ್ಟ್ 31ರಂದು ಮೈಸೂರಿನಲ್ಲಿ ಜನಿಸಿದರು. ಕರ್ನಾಟಕ, ಗ್ಲೌಸೆಸ್ಟರ್‍ಷೈರ್, ಲೀಸೆಸ್ಟರ್‍ಷೈರ್ ಮತ್ತು ಭಾರತ ತಂಡಗಳ ಪರವಾಗಿ ಆಡಿದರು. ಬಲಗೈ ಮಧ್ಯಮ ವೇಗದ ಎಸೆತಗಾರರೆಂದು ಎಬೋಲರ್‍ಏ ಪರಿಣತಿ ಪಡೆದರು. ಬ್ಯಾಟಿಂಗ್ ಪ್ರದರ್ಶನವನ್ನೂ ಮಾಡಿದ್ದಾರೆ. ಅದರಲ್ಲೂ ಬಲಗೈ ಆಟಗಾರರೇ. ಮೈಸೂರಿನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‍ನ ವಿದ್ಯಾರ್ಥಿ. ಬಿ.ಇ. ಪದವೀಧರ.

	ಇವರು 1989ರಲ್ಲಿ ಪ್ರಥಮ ದರ್ಜೆಯ ಪಂದ್ಯಗಳಲ್ಲಿ ಆಡತೊಡಗಿದರು. ಟೆಸ್ಟ್ ಪಂದ್ಯದಲ್ಲಿ ಆಡಲು ಪ್ರವೇಶ ಪಡೆದಾಗ ವೆಸ್ಟ್ ಇಂಡಿಸ್ ಮತ್ತು ದಕ್ಷಿಣ ಆಫ್ರಿಕದ ವೇಗದ ಬೋಲರುಗಳಿಗೆ ಸರಿಸಮರೆಂಬ ಪ್ರತೀತಿ ಇತ್ತು. ಆಸ್ಟ್ರೇಲಿಯ ಪ್ರವಾಸ ತಂಡದ ಆಲನ್ ಬಾರ್ಡರರಿಂದ ಸೈ ಎನಿಸಿಕೊಂಡರು. ಅನಂತರ ದಕ್ಷಿಣ ಆಫ್ರಿಕದ ಪ್ರವಾಸದಲ್ಲೂ (1992) ಒಳ್ಳೆಯ ಪ್ರದರ್ಶನ ನೀಡಿದರು. ಭಾರತದಲ್ಲಿ ಟೆಸ್ಟ್ ಪಂದ್ಯಾವಳಿಯಲ್ಲಿ ಇವರಿಗೆ ಸ್ಥಾನ ದೊರೆಯಲಿಲ್ಲ. ಕಪಿಲ್‍ದೇವ್ ನಿವೃತ್ತಿಯ ಅನಂತರ ಶ್ರೀನಾಥ್ ಹೆಚ್ಚು ಪ್ರಕಾಶಕ್ಕೆ ಬಂದರು. ಕಪಿಲ್‍ದೇವರ ಸ್ವಿಂಗ್ ಎಸೆತಗಳು ಕ್ರಿಕೆಟ್ ಅಬಿsಮಾನಿಗಳ ಮನ ಸೂರೆಗೊಂಡಿದ್ದವು. ಅನಂತರ ಬಂದ ಜಾವಗಲ್ಲರು ಆ ಶೈಲಿಯನ್ನು ಮುಂದುವರಿಸಿದರೆನ್ನಲಾಗಿದೆ. ಹನ್ನೊಂದು ವರ್ಷಗಳ ಕಾಲ ಅಂತರಾಷ್ಟ್ರೀಯ ಪಂದ್ಯಾಟಗಳಲ್ಲಿ ಪಾಲ್ಗೊಂಡು ಇವರು ಆ ಕ್ಷೇತ್ರದಿಂದ ನಿರ್ಗಮಿಸಿದರು. ಕಪಿಲದೇವ್ ಅನಂತರದ ಪಟ್ಟ ಇವರದೇ ಎನಿಸಿಕೊಂಡರು. ಇವರ ಎಸೆತದ ಪ್ರಧಾನ ಲಕ್ಷಣವೆಂದರೆ ಭುಜಪರಾಕ್ರಮ. ಪಿಚ್ಚಿಗೆ ನೇರವಾಗಿ ಅತ್ಯಂತ ಬಲದಿಂದ ಕೂಡಿ ಪ್ರಹಾರ ಮಾಡುವುದರಲ್ಲಿ ನಿಷ್ಣಾತರೆಂದು ಹೆಸರು ಮಾಡಿದರು. ತುಂಬ ಸಪ್ಪೆಯ ವಿಕೆಟ್ಟಿನ ಮೇಲೂ ವೇಗ ಮತ್ತು ಪುಟಿತ ಸಾಧಿಸುತ್ತಿದ್ದರು. ಅನಿರೀಕ್ಷಿತ ಇನ್ ಸ್ವಿಂಗರ್ ಮತ್ತು ವಿಳಂಬಿತ ಹಾಗೂ ಮಾರಕ ಮಾರ್ಕರುಗಳಿಂದಲೂ ಬ್ಯಾಟ್ ದಾರರಿಗೆ ಯಮಸದೃಶ ಎನಿಸಿಕೊಂಡಿದ್ದರು. ಲೈನ್ ಮತ್ತು ಲೆಂಗ್ತ್ ವಿಚಾರದಲ್ಲಿ ಬೋಲಿಂಗಿನ ಮೂಲಭೂತ ಗುಣಲಕ್ಷಣವನ್ನು ಕುರಿತಂತೆ ಎಂದಿಗೂ ರಾಜಿಯ ಮನೋಧರ್ಮ ತೋರಿಸಲಿಲ್ಲ. ಲೈನು ಮತ್ತು ಲೆಂಗ್ತುಗಳನ್ನು ಯಾವಾಗಲೂ ಕಾಪಾಡಿಕೊಳ್ಳುತ್ತಿದ್ದರು.

	ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರಥಮತಃ ಇವರು ಭಾಗವಹಿಸಿದ್ದು ಪಾಕಿಸ್ತಾನದ ವಿರುದ್ಧ. ಷಾರ್ಜದಲ್ಲಿ ವಿಲ್ಸ್ ಟ್ರೋಫಿಗಾಗಿ ಭಾರತ ಆಡಿದ ಆಟದಲ್ಲಿ. ಟೆಸ್ಟ್ ಆಟದಲ್ಲಿ ಇವರು ಪ್ರಥಮತಃ ಭಾಗವಹಿಸಿದ್ದು 1991-92ರಲ್ಲಿ. ಭಾರತದ ಆಸ್ಟ್ರೇಲಿಯ ಪ್ರವಾಸದ ಅಂಗವಾಗಿ ಬ್ರಿಸ್‍ಬೇನ್‍ನಲ್ಲಿ ನಡೆದ ಪ್ರಥಮ ಪಂದ್ಯದಲ್ಲಿ ಭಾರತದ ವೇಗದ ಆಕ್ರಮಣ ಶೀಲ ಆಟದ ನಾಯಕತ್ವ ಶ್ರೀನಾಥರದಾಗಿತ್ತು. ವೆಸ್ಟ್ ಇಂಡಿಸ್ ತಂಡದ ವಿರುದ್ಧವಾಗಿಯೂ ಇವರು ಆಡಿದರು.

	ಶ್ರೀನಾಥರು ಒಂದು ದಿನದ ಅಂತಾರಾಷ್ಟ್ರೀಯ ಆಟದಲ್ಲಿ ಒಳ್ಳೆಯ ದಾಖಲೆ ಸಾಧಿಸಿದರು. ಡೆನಿಸ್‍ಲಿಲೀ ಮತ್ತು ವಾಕಾರ್‍ಯೂನಸ್ ಬಿಟ್ಟರೆ ಬೇರೆ ಯಾರೂ ಇವರಷ್ಟು ಕಡಿಮೆ ಆಟಗಳಲ್ಲಿ ನೂರು ವಿಕೆಟ್ಟುಗಳನ್ನು ಬಗಲಿಗೆ ಹಾಕಿಕೊಂಡಿರಲಿಲ್ಲ. ಇವರು ಇನಿಂಗ್ಸ್ ಕೊನೆಯ ಬ್ಯಾಟ್‍ದಾರರಾಗಿ ಅತ್ಯಂತ ವೇಗದಲ್ಲಿ ರನ್ನು ಮಾಡಿದ್ದೂ ಉಂಟು. ಇವರು 752 ಒಂದು ದಿನದ ಅಂತಾರಾಷ್ಟ್ರೀಯ ಆಟಗಳಲ್ಲಿ ಬ್ಯಾಟ್ ಮಾಡಿ ಒಟ್ಟು 830ರನ್ನು ಗಳಿಸಿದ್ದರು. ಇವರು ಗಳಿಸಿದ ಅತಿ ಹೆಚ್ಚಿನ ರನ್ 53, ಅರ್ಧ ಶತಕ. ಇವರು ಬೋಲರ್ ಆಗಿ ಗಳಿಸಿದ ವಿಕೆಟುಗಳು 267. 23ರನ್ನು ಕೊಟ್ಟು 5 ವಿಕೆಟ್ ತೆಗೆದುಕೊಂಡಿದ್ದು ಇವರ ಅತ್ಯುತ್ತಮ ಸಾಧನೆ. ಗಳಿಸಿದ ಅತಿ ಹೆಚ್ಚಿನ ರನ್ 76. ಬೋಲ್ ಮಾಡಿ ಪಡೆದ ವಿಕೆಟುಗಳು 185. ಅತ್ಯುತ್ತಮ ಸಾಧನೆಯೆಂದರೆ 86ಕ್ಕೆ 8 ವಿಕೆಟ್ ಪಡೆದದ್ದು. 

	ಮೈಸೂರು ಎಕ್ಸ್‍ಪ್ರೆಸ್ ಎಂಬ ಹೊಗಳಿಕೆಗೆ ಭಾಜನರಾಗಿದ್ದ ಶ್ರೀನಾಥ್ ಅವರು 199798ರಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆ ಪಡೆಯಬೇಕಾಯಿತು. ಅತಿಯಾಗಿ ಬೋಲ್ ಮಾಡಿದ್ದರ ಪರಿಣಾಮವಿದು ಎನ್ನಲಾಗಿದೆ. ಆಮೇಲೆ ಪೂರ್ಣವಾಗಿ ಚೇತರಿಸಿಕೊಂಡರು. ಭಾರತದ ವಿಶ್ವಕಪ್ ಆಟದಲ್ಲಿ ಇವರು ತಮ್ಮ ಹಿಂದಿನ ಸಾಧನೆಯನ್ನು ಮೀರಿಸುವ ರೀತಿಯಲ್ಲಿ ಆಡಿದರು. ಅನಂತರ ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾದರು. 1996ರಲ್ಲಿ ಭಾರತ ಸರ್ಕಾರ ಇವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿತು. ಈಗ ಇವರು ಎಳೆಯರಿಗೆ ಕ್ರಿಕೆಟ್ ಆಟದಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ.			 
(ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ